ವಿನೆಗರ್
 	 - ಇದೊಂದು ದ್ರಾಕ್ಷಾಮದ್ಯ. ಹಣ್ಣುಗಳಿಂದ ತೆಗೆದ ಹುಳಿನೀರು. ಇದರಲ್ಲಿ ಸೇ. 3-6 ಅಸೆಟಿಕ್ ಆಮ್ಲ ಇರುವುದು.  ಸು. 10,000 ವರ್ಷಗಳಿಂದ ಮಾನವನಿಗೆ ಪರಿಚಿತ. ಕಾಕಂಬಿ, ಹಣ್ಣುಗಳು, ಜೇನು, ಆಲೂಗೆಡ್ಡೆ, ಕಾಳುಗಳು ಮತ್ತು ಹಾಲೊಡೆದ ನೀರು (ವ್ಹೇ) ಇತ್ಯಾದಿಗಳಿಂದ ತಯಾರಿಸಬಹುದು. ನೈಸರ್ಗಿಕ ಶರ್ಕರಗಳಿಂದ ಪಡೆದ ಆಲ್ಕೊಹಾಲನ್ನು ಕಿಣ್ವನಗೊಳಿಸಿದರೆ ವಿನೆಗರ್ ಲಭ್ಯ. ಇದನ್ನು ಬ್ಯಾಬಿಲೋನಿಯನ್ನರು ಆಹಾರ ಪರಿರಕ್ಷಕವಾಗಿಯೂ ಮಸಾಲೆಯಾಗಿಯೂ ರೋಮನ್ನರು ಪಾನೀಯವಾಗಿಯೂ ಬಳಸುತ್ತಿದ್ದರೆಂದು ಪ್ರತೀತಿ. ಇದಕ್ಕೆ ದ್ರಾವಕ ಗುಣವಿದೆಯೆಂದು ಪ್ರದರ್ಶಿಸಿದಾಕೆ ರಾಣಿ ಕ್ಲಿಯೊಪಾತ್ರ (ಕ್ರಿ.ಪೂ. 69-30). ವಿನೆಗರ್‍ನಲ್ಲಿ ಅಮೂಲ್ಯ ಮುತ್ತುಗಳನ್ನು ವಿಲೀನಿಸಿ ಕುಡಿದು “ಆಸ್ತಿಯನ್ನು ಕ್ಷಣಮಾತ್ರದಲ್ಲಿ ಅರಗಿಸಿಕೊಳ್ಳುವ” ಪಣವನ್ನು ಗೆದ್ದಳಂತೆ. ವಿನೆಗರ್‍ಗೆ ಶಾಮಕ ಮತ್ತು ಗಾಯಗಳನ್ನು ಮಾಯಿಸುವ ಗುಣವಿದೆ. ಒಂದನೆಯ ಮಹಾಯದ್ಧದಲ್ಲಿ ಗಾಯಾಳುಗಳನ್ನು ಇದರಿಂದ ಉಪಚರಿಸಲಾಗುತ್ತಿತ್ತೆಂದು ವರದಿ. ಹ್ಯಾನಿಬಾಲ್ ಎಂಬ ದೈತ್ಯ ಆಲ್ಪ್ಸ್ ಪರ್ವತ ದಾಟುವಾಗ ದಾರಿಗೆ ಅಡ್ಡವಾಗಿದ್ದ ಬಂಡೆಗಳ ಮೇಲೆ ವಿನೆಗರ್ ಸಿಂಪಡಿಸಿದಾಗ ಅವು ಬಿರಿದು ಪುಡಿಯಾದ್ದರಿಂದ ದಾರಿ ಸುಗಮವಾಯಿತೆಂದು ಉಲ್ಲೇಖ. 

	ವಿನೆಗರ್‍ನ ತಯಾರಿಕೆಗೆ ಸಾಮಾನ್ಯವಾಗಿ ಬಳಸುವುದು ಸೇಬಿನ ರಸ. ದ್ರಾಕ್ಷಿ ಮತ್ತು ಪೀಚ್ ಹಣ್ಣುಗಳನ್ನೂ ಉಪಯೋಗಿಸಬಹುದು. ಆಕರಕ್ಕೆ ಅನುಗುಣವಾಗಿ ಉತ್ಪನ್ನಕ್ಕೆ ನಾಮಕರಣ. ದಾಸ್ತಾನು ಮಾಡಿದ ವಿನೆಗರ್‍ನಲ್ಲಿ ಅದರಲ್ಲೇ ಇರುವ ಬ್ಯಾಕ್ಟೀರಿಯಾಗಳು “ಜನನಿ” ಎಂಬುದನ್ನು ಸೃಷ್ಟಿಸುತ್ತವೆ. ವಾಸ್ತವವಾಗಿ ಇದು ಸೆಲ್ಯುಲೋಸ್. ಆದ್ದರಿಂದ ಅಪಾಯವಿಲ್ಲ. ಬೇರಾದರೆ ಸೋಸಿ ತೆಗೆದುಹಾಕಬಹುದು. ಬಲುಕಾಲ ದಾಸ್ತಾನು ಮಾಡಬಹುದು. ವಿನೆಗರ್‍ನ ಆಮ್ಲೀಯತೆಯೇ ಅದಕ್ಕೆ ಶ್ರೀರಕ್ಷೆ.	
(ಎಚ್.ಜಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ